ಬಸವಣ್ಣ ವಚನಗಳು ಮತ್ತು ಅರ್ಥ | Basavanna Vachanagalu in Kannada with Explanation

ಬಸವಣ್ಣ ಜೀವನ ಚರಿತ್ರೆ | Basavanna life History

೧೨ನೇ ಶತಮಾನದಲ್ಲಿ ನಡೆದ ವಚನ ಚಳವಳಿಯ ಹರಿಕಾರರಲ್ಲಿ ಪ್ರಮುಖರಾದವರು ಬಸವಣ್ಣ. ಪ್ರಮುಖ ಶರಣ, ವಚನಕಾರ, ಸಮಾಜ ಸುಧಾರಕ, ಧಾರ್ಮಿಕ ಮಹಾಕ್ರಾಂತಿಯ ನೇತಾರ, ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದ ಬಸವಣ್ಣನವರ ಕಾಲ ಸುಮಾರು ಕ್ರಿ.ಶ. ೧೧೩೧, ಕಲಚೂರಿ ಬಿಜ್ಜನಳ ರಾಜ್ಯದ ಭಂಡಾರಿಯಾಗಿದ್ದ ಇವರು ಭಕ್ತಿ ಭಂಡಾರಿಯೂ ಆಗಿದ್ದರು. ಕೂಡಲ ಸಂಗಮದೇವ ಇವರ ವಚನಗಳ ಅಂಕಿತ.

ಬಸವಣ್ಣ ಫೋಟೋ
ಬಸವಣ್ಣ ಫೋಟೋ

ಇವರು ಸುಮಾರು ೧೦೦೦ಕ್ಕೂ ಹೆಚ್ಚಿನ ವಚನಗಳನ್ನು ರಚಿಸಿದ್ದು, ಅವು ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಜೀವನಕ್ಕೆ ಬೆಳಕನ್ನು ಚೆಲ್ಲುತ್ತವೆ ಹಾಗೂ ವಚನಕಾರರ ಜೀವನ ದೃಷ್ಟಿಯನ್ನು ತಿಳಿಸುತ್ತವೆ. ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ’, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ’ ಎಂದು ಹೇಳುವ ಮೂಲಕ ಬಸವಣ್ಣನವರು ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಡಿಸಿಕೊಳ್ಳಬೇಕೆಂಬ ತತ್ವವನ್ನು ಬೋಧಿಸುತ್ತಾರೆ.

ಸಾಮಾಜಿಕ ಸಮಾನತೆಯನ್ನು ಸಾಧಿಸುವುದು ಇವರ ಗುರಿ. ಒಟ್ಟಿನಲ್ಲಿ ಬಸವಣ್ಣನವರ ವೈಚಾರಿಕ ದೃಷ್ಟಿ ಬೌದ್ಧಿಕ ವಿಕಾಸಕ್ಕೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ, ಆಧ್ಯಾತ್ಮ ಪ್ರಗತಿಗೆ ತಳಹದಿಯಾಗಿದೆ. ಕನ್ನಡ ಭಾಷೆ ಇವರ ವಚನಗಳಿಂದ ಒಂದು ಅಪೂರ್ವವಾದ ಶಕ್ತಿ ಹಾಗೂ ಶ್ರೀಮಂತಿಕೆಯನ್ನು ಪಡೆಯಿತು.

ಬಸವಣ್ಣ ವಚನಗಳ Summery

ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆಯನ್ನು ನೀಡಿವೆ. ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯೆ, ಹೃದಯ ವೈಶಾಲ್ಯತೆಯ ಗೈರು ಹಾಜರಾದಾಗ ನಿಮ್ಮ ಭಕ್ತಿಗೆ ಅರ್ಥವಿರುವುದಿಲ್ಲ. ಮೂಲದಲ್ಲಿ ಸತ್ವವಿರದ ತೋರಿಕೆಯ ಭಕ್ತಿಯು ಮಂಗನ ಕೈಯೊಳಗಣ ಮಾಣಿಕ್ಯದಂತೆ, ಬೆಲೆ ತಿಳಿಯದೆ ಹೋದೀತು, ನಿಮ್ಮನ್ನು ಕಾಯಬೇಕಾದವರು ಕೊಲ್ಲಲು ಸಂಚುಹೂಡಿದಾಗ ಇನ್ಯಾರೂ ಕಾಯಲಾರರೆಂಬ ಸಂಗತಿಗಳನ್ನು ಇಲ್ಲಿನ ವಚನಗಳು ವಿವರಿಸಿವೆ.

ಶಿವಪಥವನ್ನು ಅರಿಯುವ ಸಂಕಲ್ಪಬಲ ನಿಜಭಕ್ತನ ಮೂಲ ಗುಣವಾಗಬೇಕು ಎಂಬುದನ್ನು ಪ್ರತಿಪಾದಿಸುವಲ್ಲಿಯೂ ಎದ್ದು ಕಾಣುವ ಕಾವ್ಯಾತ್ಮಕ ಗುಣವುಳ್ಳ ಬಸವಣ್ಣನವರ ಕವಿ ಹೃದಯವು ಬಿಂಬಿಸಿದೆ. ಅಸ್ವಸ್ಥ ವ್ಯಕ್ತಿ ಮತ್ತು ಅಸ್ವಸ್ಥ ಸಮಾಜದ ಲಕ್ಷಣಗಳ ದರೆ ಆತ್ಮನಿಂದೆ-ಆತ್ಮಸ್ತುತಿ-ಆತ್ಮಹತ್ಯೆಆತ್ಮರತಿ ಮುಂತಾದುವು.

ಆತ್ಮವಿಮರ್ಶೆಯು ಆರೋಗ್ಯವಂತ ವ್ಯಕ್ತಿ ಮತ್ತು ಆರೋಗ್ಯವಂತ ಸಮಾಜಗಳ ಪ್ರತೀಕ. ಬಸವಣ್ಣನವರ ವಚನಗಳಲ್ಲಿರುವಷ್ಟು ಆತ್ಮವಿಮರ್ಶೆಯನ್ನು ಮತ್ತೊಬ್ಬ ವಚನಕಾರರಲ್ಲಿ ಕಾಣಲಾರೆವು. ಆತ್ಮವಿಮರ್ಶೆಯು ವ್ಯಕ್ತಿತ್ವದ ವರ್ಧಮಾನಕ್ಕೆ ಪ್ರೇರಕವಾಗುವ ಚೈತನ್ಯಶಕ್ತಿ.


Also read –


ಬಸವಣ್ಣ ವಚನಗಳು ಮತ್ತು ಅರ್ಥ | Basavanna Vachanagalu in Kannada with Explanation

1 ಬಸವಣ್ಣ ವಚನ

ಮನಮನ ಬೆರೆಸಿದಲ್ಲಿ ತನು ಕರಗದಿದ್ದಡೆ,
ಸೋಂಕಿನಲ್ಲಿ ಪಳಕಂಗಳು ಹೊರಹೊಮ್ಮದಿದ್ದಡೆ,
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ,
ನುಡಿವಲ್ಲಿ ಗದ್ಧದಂಗಳು ಪೂಣ್ದಿದ್ದಡೆ;
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ?
ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ! || ೧ ||

ಬಸವಣ್ಣ / Basavanna

ಬಸವಣ್ಣನವರು ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯತೆ, ಹೃದಯ ವೈಶಾಲ್ಯತೆಯು ಗೈರು ಹಾಜರಾದಾಗ ನಿಮ್ಮ ಭಕ್ತಿಗೆ ಅರ್ಥವಿರುವುದಿಲ್ಲ. ಎಂಬುದನ್ನು ಹೀಗೆ ವಿವರಿಸುತ್ತಾರೆ. ಮನುಷ್ಯರ ನಡುವೆ ಮನಸ್ಸುಗಳು ಬೆರೆತಾಗ ತನು ಕರಗುವಂತಹ ಅಂತಃಕರಣವಿರಬೇಕು. ಪರಸ್ಪರ ಸ್ಪರ್ಶಗಳಲ್ಲಿ ಪುಳಕುಗಳಿರಬೇಕು.

ಒಬ್ಬರೊಬ್ಬರನ್ನು ಕಂಡಾಗ ಕಣ್ಣೀರು ಸುರಿಯುವಂತಕ ಭಾವುಕತೆಗಳಿರಬೇಕು. ಮಾತನಾಡುವಾಗ ಗಂಟಲು ತೇವಗೊಂಡಿರಬೇಕು. ಇಂತಹ ಆತ್ಮೀಯತೆಯನ್ನು ಹೊಂದಿರುವುದೇ ಭಕ್ತಿಯ ಗುರುತು, ಅಂತಃಕರಣ ಭಾವುಕತೆ, ಆತ್ಮೀಯತೆ, ಪುಳಕಗಳಂತಹ ಭಾವಗಳನ್ನು ಹೊಂದಿರದೆ ಕೃತಕವಾಗಿ ನಡೆದುಕೊಳ್ಳುವವನು ಡಾಂಭಿಕನೇ (ಮೋಸಗಾರ) ಹೊರತು ಉತ್ತಮ ಭಕ್ತನಾಗಿರಲಾರ ಎಂದು ಹೇಳುವ ಮೂಲಕ ಮಾನವೀಯ ಗುಣಗಳೇ ಭಕ್ತಿಯ ಮೂಲ ಎಂಬುದನ್ನು ಬಸವಣ್ಣನವರು ಹೇಳುತ್ತಾರೆ.

2 ಬಸವಣ್ಣ ವಚನ

ಅರ್ಥರೇಖೆಯಿದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು?
ನಿಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು? ಶಿವಪಥವನರಿಯದನ್ನಕ್ಕ. || ೨ ||

ಬಸವಣ್ಣ / Basavanna

ಸತ್ವವಿರದ ತೋರಿಕೆಯ ಭಕ್ತಿಯು ಮಂಗನ ಕೈಯಲ್ಲಿರುವ ಮಾಣಿಕ್ಯದಂತೆ ಅದರ ಬೆಲೆಯನ್ನು ಮಂಗ ಅರಿಯಲಾರದು. ಹಾಗೆ ತೋರಿಕೆಯ ಭಕ್ತಿ ನಿಜವಾದ ಭಕ್ತಿಯ ಬೆಲೆಯನ್ನು ಅರಿಯಲಾರದು ಎಂಬುದನ್ನು ಬಸವಣ್ಣನವರು ಕೆಲವು ಉದಾಹರಣೆಗಳ ಮೂಲಕ ಸಾಬೀತು ಮಾಡುತ್ತಾರೆ.

ಕೈಯಲ್ಲಿ ಅರ್ಧರೇಖೆಯಿದ್ದು ಸಾಕಷ್ಟು ಸಂಪತ್ತು ಹೊಂದಿದ್ದರು ಸಹ ಅದನ್ನು ಅನುಭವಿಸಲು ಆಯಸ್ಸೇ ಇಲ್ಲದಿದ್ದರೆ ಅದು ವ್ಯರ್ಥವಲ್ಲವೆ? ಹೋರಾಡಲಾರದ ಹೇಡಿಯ ಕೈಯಲ್ಲಿ ಚಂದ್ರಾಯುಧವೇ ಇದ್ದರು ಉಪಯೋಗಕ್ಕೆ ಬಾರದು.

ಕುರುಡನ ಕೈಯಲ್ಲಿ ಕನ್ನಡಿ ಇದ್ದರೆ ಏನು ಪ್ರಯೋಜನ ಅದನ್ನು ಬಳಸಲಾರ, ಕೋತಿಯ ಕೈಯಲ್ಲಿ ಮಾಣಿಕ್ಯವೇ ಇದ್ದರು ಅದರ ಬೆಲೆಯನ್ನರಿಯದ ಕೋತಿಗೆ ಅದರಿಂದ ಉಪಯೋಗವಿಲ್ಲ ಹಾಗೆ ಕೂಡಲಸಂಗಮನ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದರು ಫಲವಿಲ್ಲ ಅಂದರೆ ಶರಣರ ಶ್ರೇಷ್ಠತೆಯನ್ನು ಬೆಲೆಯನ್ನು ಅರ್ಥಮಾಡಿಕೊಳ್ಳಲಾರದವನ ಕೈಯಲ್ಲಿ ಲಿಂಗವೇ ಇದ್ದರು. ಅದು ವ್ಯರ್ಥವೇ ಸರಿ ಅಂತಹದ್ದು ಶಿವಪಥವನ್ನು ಅರಿಯಲಾರದ ಭಕ್ತಿ ಎಂದು ಹೇಳುವ ಮೂಲಕ ಬಸವಣ್ಣನವರು ಶರಣರ ಶ್ರೇಷ್ಠತೆಯನ್ನು ಹೇಳುತ್ತಾರೆ.

3 ಬಸವಣ್ಣ ವಚನ

ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಿಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ! || ೩ ||

ಬಸವಣ್ಣ / Basavanna

ಕಾಯಬೇಕಾದವರೆ ಕೊಲ್ಲಲು ನಿಂತರೆ ನಾವು ಯಾರಿಗೆ ದೂರಲು ಸಾಧ್ಯ, ಬದುಕಲು ಸಾಧ್ಯ? ಸಾಧ್ಯವಿಲ್ಲ ಎಂಬುದನ್ನು ಈ ರೀತಿ ವಿವರಿಸಲಾಗಿದೆ. ಒಲೆಅತ್ತಿ ಉರಿದರೆ ನಿಲ್ಲಲು ಬೇರೆ ಜಾಗವಿದೆ ನಿಲ್ಲಬಹುದು ಉಳಿಯಬಹುದು.

ಆದರೆ ಭೂಮಿಯೇ ಅತ್ತಿ ಉರಿಯಲಾರಂಭಿಸಿದರೆ ನಿಲ್ಲಲು ಜಾಗ ಸಿಗುವುದೇ ಬದುಕಲು ಸಾಧ್ಯವೇ ಕೆರೆಯ ನೀರನ್ನು ಸಂರಕ್ಷಿಸಲೆಂದು ಏರಿಯನ್ನು ಕಟ್ಟಿದರೆ ಆ ಏರಿಯೇ ಕೆರೆಯ ನೀರನ್ನೆಲ್ಲ ಕುಡಿದರೆ ನೀರನ್ನು ಉಳಿಸಲು ಸಾಧ್ಯವೇ, ಮನೆಯನ್ನು ನೋಡಿಕೊಳ್ಳಬೇಕಾದ ಹೆಂಗಸೆ ಮನೆಯಲ್ಲಿ ಕಳ್ಳತನ ಮಾಡಿದರೆ ಅದನ್ನು ತಡೆಯಲು ಸಾಧ್ಯವೇ, ಅಮೃತ ಸಮಾನವಾದ ತಾಯಿಯ ಹಾಲೇ ವಿಷವಾಗಿ ಕೊಂದರೆ ಮತ್ತಾರು ನಮ್ಮನ್ನು ಉಳಿಸಲು ಸಾಧ್ಯ, (ರಕ್ಷಕರೇ ಭಕ್ಷಕರಾದರೆ ಇಂತಹ ವಿಘಟನೆಗಳು ಸಂಭವಿಸುತ್ತವೆ.

ಇದನ್ನು ಯಾರ ಬಳಿ ದೂರಲು ಸಾಧ್ಯ. ಆದ್ದರಿಂದ ದೇವರಿಗೆ ಮೊರೆ ಹೋದ ನಿಮ್ಮನ್ನು ಆತನೇ ಉಳಿಸಬೇಕೇ ಹೊರತು ಯಾರಿಂದಲೂ ಸಾಧ್ಯವಿಲ್ಲ ಎಂಬಂತೆ ವಚನಕಾರರು ಹೇಳುತ್ತಾರೆ.

Also read – ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | Masti Venkatesha Iyengar Information in Kannada

Leave a Reply